Friday, April 1, 2011

ನೆನಪಿನಾಳದಲಿ ಯುಗಾದಿ

'ಯುಗಾದಿ ಹೊಸತನದ ಸಂಕೇತ... ಸಕಲರಿಗೂ ತರಲಿ ಶುಭ... ಮೂಡಲಿ ಜೀವನದಲಿ ಹೊಸಬೆಳಕು... ಸಂವತ್ಸರಗಳಂತೆ ಬದಲಾಗಲಿ ಮನವು... ಬೆಳೆಯಲಿ ಹೃದಯ ಹೃದಯಗಳ ನಡುವಿನ ಪ್ರೀತಿಯ ಸಂಬಂಧ... ಸರ್ವರಿಗೂ ಖರ ಸಂವತ್ಸರದ ಶುಭಾಶಯಗಳು.’ ಅಂದು ಎಲ್ಲಿಲ್ಲದ ಆನಂದ. ಹೊಸ ಜೀವನದ ಹೊಸ್ತಿಲಲಿ ನಿಂತಿರುವ ನನಗೆ ಯುಗಾದಿಯ ಸ್ವಾಗತ ... ನಾನೇನೋ ಮನೆಗೆ ಬಂದ ಲಕ್ಷ್ಮಿ ಎಂಬಂತೆ ಮಾವನ ಉಪಚಾರ... ಬಾಗಿಲಿಗೆ ರಂಗೋಲಿಯಿಟ್ಟು ದೇವರ ಪೂಜೆಗೆ ಅಣಿಮಾಡಲು ಅತ್ತೆಯ ಸಹಕಾರ... ನಿಜಕ್ಕೂ ಬಾಳ ಹಾದಿಯ ಸುಖ-ದುಃಖದ ಪಯಣಕ್ಕೆ ಆ ಯುಗಾದಿ ದಾರಿ ದೀಪವಾಯಿತು... ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗದ ಆದಿ ‘ಯುಗಾದಿ’ ನೂರಾರು ಕನಸುಗಳನ್ನು ಹೊತ್ತು ತಂದಿತ್ತು. ವಾಸ್ತವಗಳಿಗೆ ಮುಖಾ ಮುಖಿಯಾಗಿ ಸೆಣಸುವ, ಬದುಕಿನ ಅರ್ಥವನ್ನು ಹುಡುಕುವ, ಬದುಕಿನ ಮುಂದಿರುವ ದಟ್ಟ ಅರುಣೋದಯದ ಬೆಳಕಿನಲಿ ಕರಗಿ ಹೋಗುವಂತೆ ಕಷ್ಟಗಳು ಕರಗಿ ಹೋಗಿತ್ತು. ಹೊಸದಾಗಿ ಬಿಗಿದುಕೊಂಡ ಸಂಬಂಧಗಳಿಗೆ ಸುಂದರವಾದ ಅರ್ಥವನ್ನು ಯುಗಾದಿ ತಂದಿತ್ತು. ತುಂಟಾಟದ ನೆನಪುಗಳೊಂದಿಗೆ ಜವಾಬ್ದಾಯ ಜೀವನದತ್ತ ಅಡಿ ಇಡುವ ಶುಭ ಘಳಿಗೆ ಅದಾಗಿತ್ತು. ಪ್ರಕೃತಿಯಲ್ಲಿ ಗಿಡ-ಮರಗಳು ಹೊಸ ಚಿಗುರುಗಳಿಂದ ಆವೃತಗೊಂಡಂತೆ, ಕೈ ತುಂಬ ಬಳೆಗಳು, ಕಿವಿಯಲ್ಲಿ ಮಿನುಗುವ ಓಲೆ, ಹಣೆಯಲ್ಲಿ ನಗುತ್ತಿದ್ದ ಕುಂಕುಮ, ಕೆನ್ನೆಗೆ ಹಚ್ಚಿದ ಅರಿಶಿಣವು ನನ್ನ ಬಾಳಿನ ಬಾಗಿಲಿಗೆ ಹೊಸ ಭಾಗ್ಯ ತಂದಿತ್ತು. ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಯಂತೆ ಪ್ರಕೃತಿಗೆ ಅನ್ವರ್ಥ ಎನ್ನಿಸುವ ಹೆಣ್ಣಿನ ಜೀವನದಲ್ಲೂ ಬದಲಾವಣೆಗಳು ವೌನವಾಗಿಯೇ ಬರುತ್ತದೆ. ಅದಕ್ಕೆ ಸಹನೆಯಿಂದ ಸಹಕರಿಸಿದಾಗಲೇ ಬದುಕಿನ ಸಿಹಿ-ಕಹಿಗಳನ್ನು ನೀಗಿಸಲು ಸಾಧ್ಯ ಎಂಬ ಅಮ್ಮನ ಮಡಿಲ ಮಾತು ಮನದಲ್ಲಿ ಮನೆಮಾಡಿತ್ತು. ಆಗ ಉದಯಿಸಿದ ಕಲ್ಪನೆಯ ಗಿಡಕ್ಕೆ ಆ ಯುಗಾದಿಯಲ್ಲಿ ನೀರೆರೆದಿದ್ದೆ. ಅದೀಗ ಬೆಳೆದು ತಂಪಾದ ಗಾಳಿ ಬೀಸುತ್ತಿದೆ ಎಂದು ಆನಂದಿಸುತ್ತಿರುವಾಗಲೇ ಮತ್ತೆ ಯುಗಾದಿ ಬಂದಿದೆ. ಎಲ್ಲೆಲ್ಲೂ ಸಡಗರದ ಇಂಪು ಮೊಳಗಿದೆ. ನಿಜ, ಯುಗಾದಿಯೇ ಹಾಗೆ. ಕೇವಲ ವರುಷದ ನೆನಪುಗಳನ್ನು ಮೆಲಕು ಹಾಕುವ ಜೊತೆಗೆ ಏನಾದರೂ ಬದುಕಲ್ಲಿ ಸಾಧಿಸಬೇಕೆನ್ನುವ ಸಂಕಲ್ಪ ತೋಡುವಂತೆ ಮಾಡುತ್ತದೆ. ಸುಖ-ದುಃಖಗಳ ಸಾಂಕೇತಿಕ ಕಲ್ಪನೆಯೇ ಯುಗಾದಿ. ಈ ಯುಗಾದಿ ಕೇವಲ ಒಂದು ದಿನದ ಜಾತ್ರೆಯಾಗಬಾರದು, ಬದಲಿಗೆ ದಿನಂಪ್ರತಿಯ ಜಾತ್ರೆಯಾಗಬೇಕು...

2 comments:

  1. ದಿವ್ಯಾ,
    ನಿನ್ನ ಬ್ಲಾಗು ಚೆನ್ನಾಗಿದೆ. ಮು೦ದುವರಿಯಲಿ ಬರಹದ ಯಾತ್ರೆ, ಅಕ್ಷರ ಜಾತ್ರೆ.

    ReplyDelete