Monday, March 28, 2011

ಪ್ರಾಣ ಸಖಿಯಾಗಿ...

"ನಿರ್ಜೀವ ವಸ್ತುಗಳು ನಿಮ್ಮ ಆಸ್ತಿ ಎಂದು ಕೊಳ್ಳುವ ಬದಲು ನಿಮ್ಮ
ಪತಿಯೇ ಒಂದು ದೊಡ್ಡ ಆಸ್ತಿ ಎಂಬುದನ್ನು ಮರೆಯಬೇಡಿ.
ಸಂಸಾರ ಎಂದರೆ ನಿಮ್ಮ ಕನಸನ್ನು ಈಡೇರಿಸಿಕೊಳ್ಳುವ
ಸಂದರ್ಭವಲ್ಲ... ನಿಮ್ಮ ಜೀವನದ ಕರ್ತವ್ಯವನ್ನು ನೆರವೇರಿಸಲು
ಸಿಗುವ ಸುಸಂದರ್ಭ. ಅದನ್ನು ಸಹಕಾರ ಹಾಗೂ ಸಹನೆಯಿಂದ
ನಿರ್ವಹಿಸಿ ಪತಿಗೆ ಪ್ರಾಣ ಸಖಿಯಾಗಿ..."

ಹೆಣ್ಣು ಎಷ್ಟೇ ಮುಂದುವರಿದರೂ ಆಕೆ ಸಾಂಪ್ರದಾಯಿಕವಾಗಿ ಸಂಸಾರ ಎಂಬ ಬಂಧನಕ್ಕೆ ಒಳಗಾಗಲೇ ಬೇಕು. ಹಾಗಂತ ಅದು ಹೆಣ್ಣಿಗೆ ಸಿಗುವ ನಾಲ್ಕು ಗೋಡೆಯ ಮಧ್ಯದಲ್ಲಿರುವ ಬಂಧನವಲ್ಲ. ಅವಳಿಗೆ ಸಿಗುವ ಮರ್ಯಾದೆ ಮತ್ತು ಜವಾಬ್ದಾರಿಗಳು. ಒಂದು ಸಂಸಾರದಿಂದ ಇನ್ನೊಂದು ಸಂಸಾರಕ್ಕೆ ಕಾಲಿಟ್ಟು ಅಲ್ಲಿರುವ ಕಷ್ಟ ಸುಖಗಳಿಗೆ ಭಾಗಿಯಾಗಿ ಸುಂದರ ಸಂಸಾರವನ್ನು ಕಟ್ಟಬೇಕಾದ ಜವಾಬ್ದಾರಿ
ಹೆಣ್ಣಿನದು. ಸಹನೆ, ಸಹಕಾರ ಭಾವನೆಗಳು ಪುರುಷರಿಗಿಂತ ಸ್ತ್ರೀಯರಲ್ಲೇ ಹೆಚ್ಚಾಗಿರುವುದರಿಂದ ಆ ಒಂದು ಅಮೂಲ್ಯ ಸ್ಥಾನಮಾನವನ್ನು ಪ್ರಕೃತಿ ಹಾಗೂ ಸಂಸ್ಕೃತಿ ಹೆಣ್ಣಿಗೆ ಮೀಸಲು ನೀಡಿದೆ.
ಒಂದು ಹೆಣ್ಣು ಚಿಕ್ಕ ವಯಸ್ಸಿನಲ್ಲಿರುವಾಗ ತಂದೆಯ
ಆಶ್ರಯದಲ್ಲಿ , ಪ್ರಾಯಕ್ಕೆ ಬಂದಾಗ ಗಂಡನ ಆಶ್ರಯದಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಮಗನ ಆಶ್ರಯದಲ್ಲಿರಬೇಕು ಎಂದು ಮಾಡಿರುವುದು ಆಕೆ ಸ್ವತಂತ್ರವಾಗಿರಬಾರದು ಎಂದಲ್ಲಾ... ಅವಳು ಅಷ್ಟು ಅಮೂಲ್ಯವಾದವಳು ಅವಳನ್ನು ಬಹಳ ಕಾಳಜಿಯಿಂದ ಕಾಪಾಡಿಕೊಳ್ಳಬೇಕೆಂಬ ಭಾವನೆಯಷ್ಟೇ...
ಅದರಲ್ಲೂ ಹೆಣ್ಣು ಮದುವೆಯಾಗಿ ಪುರುಷನ ಬಾಳಲ್ಲಿ ಪ್ರವೇಶಿಸಿದಾಗ ಆಕೆ ಅದೆಷ್ಟು ಕಾಳಜಿ, ಸಹನೆ, ಜಾಣ್ಮೆ, ಪ್ರೀತಿ, ವಿಶ್ವಾಸದಿಂದ ಇರಬೇಕು. ಅದು ಅವಳ ಜೀವನದಲ್ಲಿ ಬರುವ ಪರೀಕ್ಷೆ ಎಂದೇ ಹೇಳ್ಬಹುದು. ಆದ್ರೆ ಆ ಪರೀಕ್ಷೆಯಲ್ಲಿ ಆಕೆ ಎರಡೂ ಕುಟುಂಬಗಳ ಸಂಬಂಧಗಳ ನಡುವೆ ಹೊಸದಾದ ಬಂಧನವನ್ನೇ ಬೆಸೆಯಬೇಕಾಗುತ್ತದೆ. ಅದೆಷ್ಟೋ ಭಾವನೆಗಳನ್ನು ಆಕೆ ತನ್ನಲ್ಲೇ ಮರೆಮಾಚಬೇಕಾಗುತ್ತದೆ. ಗೊಂದಲಕ್ಕೆ ಒಳಗಾಗಬೇಕಾಗುತ್ತದೆ. ಆ ಎಲ್ಲಾ ಸನ್ನಿವೇಶಗಳು ಆ ಕ್ಷಣಕ್ಕೆ ಅವಳಿಗೆ ಅಸಮಧಾನವನ್ನುಂಟು ಮಾಡಿದರೂ, ತನ್ನ
ಭಾವನೆಗಳ ತ್ಯಾಗಕ್ಕೆ ಪ್ರತಿಯಾಗಿ ಪ್ರೀತಿಯ ವಾತಾವರಣ ಸಂಸಾರದಲ್ಲಿ ಸಿಗುತ್ತದೆ. ಅಂತೆಯೇ ಮನೆಗೆ ಬರುವ ಸೊಸೆಯು ಎಲ್ಲರೊಂದಿಗೂ ಹೊಂದಿಕೊಂಡು ಪ್ರೀತಿ ವಿಶ್ವಾಸದಿಂದಿರಬೇಕು. ಸಮಾಜದಲ್ಲಿ ಸುಂದರ ಸಂಸಾರವನ್ನು ನಿರ್ಮಿಸಬೇಕು ಎನ್ನುವುದು ಅತ್ತೆ ಮಾವನ ಆಸೆಯಾಗಿರುತ್ತದೆಯೇ ಹೊರತು ಬಂದ ಸೊಸೆ ಅವಳಿಗಿಷ್ಟವಾಗುವಂತೆ ವರ್ತಿಸಲಿ ಎಂದಲ್ಲ... ಆದರೆ ಇತ್ತೀಚಿನ ಹೆಣ್ಣು ಮಕ್ಕಳಲ್ಲಿ ಸಂಸಾರದ ಕಲ್ಪನೆಗಳು ಹಾಗೂ ವರ್ತನೆಗಳು ಬದಲಾಗುತ್ತಿದೆ. ಇದರ ಪರಿಣಾಮವನ್ನೂ ತಾವೇ ಅನುಭವಿಸುತ್ತಿರುವುದೂ ಸಹ ಅವರಿಗೆ ಅರಿವಾಗುತ್ತಿಲ್ಲ. ಇದಕ್ಕೆ ಸರಿಯಾಗಿ ಪುರುಷರ ವರ್ತನೆಗಳೂ ಅತಿಯಾಗುತ್ತಿರುವುದೂ ಸಹ ಹೆಣ್ಣಲ್ಲಿ ಗೊಂದಲ, ಆತಂಕದ ಭಾವನೆ ಅರಳುತ್ತಿದೆ. ‘‘ಇಂದಿನ ಅನೇಕ ಹೆಣ್ಣು ಹಾಗೂ ಗಂಡು ಮಕ್ಕಳು ಚಿಕ್ಕ ವಯಸ್ಸಿನಲ್ಲಿರುವಾಗಲೇ ಬಹಳ ಸ್ವತಂತ್ರವಾಗಿ
ಹಾಗೂ ಬಹಳ ಮುದ್ದಿನಿಂದ ಬೆಳೆಯುವುದರಿಂದ ಯಾವುದೇ ಜವಾಬ್ದಾರಿಗಳ ಬಗ್ಗೆ ಕಲ್ಪನೆಗಳಿರುವುದಿಲ್ಲ. ತಂದೆ ತಾಯಿಗಳೂ ಸಹ ಮಕ್ಕಳು ಯಾವುದೇ ಕಷ್ಟವಿಲ್ಲದೆ ಬೆಳೆಯಬೇಕೆಂದು, ಯಾವುದೇ ರೀತಿಯ ಕಷ್ಟಗಳಿಲ್ಲದೆ ಬೆಳೆಸುತ್ತಾರೆ. ಅವರು ಹೇಳಿದ್ದನ್ನು ಎಷ್ಟೇ ಕಷ್ಟವಾದರೂ ನೆರವೇರಿಸುತ್ತಾರೆ. ಅದರ ಪರಿಣಾಮವಾಗಿ ಮದುವೆಯಾದ ಮೇಲೆ ಪರಸ್ಪರ ಹೊಂದಾಣಿಕೆಯಾಗದೆ ಬೇರೆಯಾಗುತ್ತಾರೆ’’
ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಸಂಸಾರದ ಪ್ರೀತಿ: ಪ್ರೀತಿ ಎಂದರೆ ತ್ಯಾಗ. ನಾವು ಇಷ್ಟ ಪಡುವವರಿಗಾಗಿ ನಮ್ಮ ಇಷ್ಟವನ್ನು ತ್ಯಾಗ ಮಾಡುವುದು. ಪರಸ್ಪರ ಒಬ್ಬರಿಗೊಬ್ಬರು ಸಹಕಾರ ಮನೋಭಾವದಿಂದ ಕೆಲಸ ಕಾರ್ಯಗಳಲ್ಲಿ ನಮ್ಮನ್ನು ಭಾಗಿಯಾಗಿಸಿಕೊಳ್ಳುವುದರಿಂದ ಒಬ್ಬರಿಗೊಬ್ಬರು ಪ್ರೀತಿ ಪಾತ್ರರಾಗಲು ಸಾಧ್ಯ. ನಾನು ಎಂಬ ಭಾವನೆಯನ್ನು ಬಿಟ್ಟು ನಾವು ಎಂಬ ಭಾವನೆ ಇದ್ದರೆ ಮಾತ್ರ
ಸಂಸಾರದ ಪ್ರೀತಿ ಸಿಗಲು ಸಾಧ್ಯ. ಎಲ್ಲಕ್ಕೂ ಮಿಗಿಲಾಗಿ ಒಬ್ಬರ ಮೇಲೆ ಇನ್ನೊಬ್ಬರು
ನಂಬಿಕೆ ಇಟ್ಟರೆ ಪ್ರಾಣಸಖಿ/ಸಖನಾಗಲು ಸಾಧ್ಯ.

ಹೀಗೆ ಮಾಡದಿರಿ
1. ಪಕ್ಕದ ಮನೆಯಲ್ಲಿರುವ ದುಬಾರಿ ವಸ್ತುಗಳು ನಮ್ಮ ಮನೆಯಲ್ಲೂ ಇರಬೇಕೆಂದು ಬಯಸಬೇಡಿ.
2. ನೀವು ಮದುವೆ ಆಗುವ ಮೊದಲು ಬಳಸಿದ ಬ್ರ್ಯಾಂಡೆಡ್ ವಸ್ತುಗಳು ದುಬಾರಿಯಾದ್ದರೆ ಅದೇ ವಸ್ತು ಈಗಲೂಬೇಕೆಂದು ಹಠ ಮಾಡದಿರಿ.
3. ನಿಮ್ಮ ಗಂಡ ಮನೆಗೆ ಬರುತ್ತಿದ್ದಂತೆಯೇ ಅಳುಮುಖ, ಸಿಡುಕು ಭಾವನೆಯನ್ನು ಹೊತ್ತು ಕುಳಿತುಕೊಳ್ಳ ಬೇಡಿ.
4. ನಿಮ್ಮ ಐಶಾರಾಮಿ ನಿರೀಕ್ಷೆಯನ್ನು ಒಂದಾದ ಮೇಲೊಂದರಂತೆ ಪದೇಪದೇ ಗಂಡನ ಮೇಲೆ ಹೇರಬೇಡಿ.
5. ಗಂಡ ಬೇಸರದಲ್ಲಿರುವಾಗ ಯಾವುದೋ ಕಾಯಿಲೆ ಬಂದಾಗ ಅಥವಾ ಇನ್ಯಾವುದೋ ಸಮಸ್ಯೆ ಗುರಿಯಾದಾಗ ನಿಮಗೆ ಸಂಬಂಧ
ಇಲ್ಲದವರಂತೆ ವರ್ತಿಸಬೇಡಿ.
6. ನಿಮ್ಮ ನಡುವೆ ಜಗಳ ( ಭಿನ್ನಾಭಿಪ್ರಾಯ) ಉಂಟಾದಾಗ ಪತಿಯೇ ಕ್ಷಮೆ ಕೇಳಬೇಕೆಂದು ಬಯಸಬೇಡಿ.
7. ಮನೆಗೆ ಅತಿಥಿ, ಸ್ನೇಹಿತರು ಅಥವಾ ನೆರೆಹೊರೆಯವರು ಬಂದಾಗ ನಿಮ್ಮ ಪತಿಯ ಬಗ್ಗೆ ಚಾಡಿ ಹೇಳುವುದು ಹಾಗೂ ತುಚ್ಛವಾಗಿ ಮಾತನಾಡಬೇಡಿ.
8. ಪ್ರತಿಬಾರಿಯೂ ನಿಮ್ಮ ಇಷ್ಟ ದಂತೆಯೇ ನೆದುಕೊಳ್ಳಬೇಕೆಂದು ಬಯಸಬೇಡಿ.
ಅವರಿಗೂ ಭಾವನೆಳಿವೆ ಸ್ವಾತಂತ್ರ್ಯವಿದೆ ಎಂಬುದನ್ನುಮರೆಯದೆ ಅವರಿಷ್ಟದಂತೆ ಇರಲು ಬಿಡಿ.
9.ನಿಮಗೆ ಸಿಟ್ಟು ಬಂದಿದೆ ಎಂದು ತೋರಿಸಲು ಮನೆಯಲ್ಲಿರುವ ಪಾತ್ರೆಎಸೆಯುವುದು ಗಂಡನ ಶರ್ಟ ಹರಿಯುವುದು ಅಥವಾ
ಪಕ್ಕದಮನೆಯವರಿಗೆಲ್ಲಾ ಕೇಳುವಂತೆ ಕೂಗಬೇಡಿ.
10. ಗಂಡನ ತಂದೆ ತಾಯಿಗಳನ್ನು ಬಾಯಿಗೆ ಬಂದಂತೆ ಆಡಿಕೊಂಡು, ಅವರ
ಮನೆಯವರಿಂದ ಗಂಡನನ್ನು ದೂರ ಇರುವಂತೆ ಮಾಡಬೇಡಿ.

ಹೀಗೆ ಮಾಡಿ
1. ನೀವು ವಿವಾಹವಾಗಿ ಬಂದ ಮನೆಯವರ ಸಂಪ್ರದಾಯ,ಸಂಸ್ಕೃತಿಯನ್ನು ತಿಳಿಯಲು ಪ್ರಯತ್ನಿಸಿ.
2. ಅತ್ತೆ ಮಾವನನ್ನೂ ತಂದೆ ತಾಯಿಯಂತೆ ನೋಡಿಕೊಳ್ಳಿ. ಅವರೇನಾದರೂ ಹಾಗಲ್ಲಾ ಹೀಗೆ ಎಂದರೆ
ಸಿಟ್ಟಿನಿಂದ ಆಗದು ಎನ್ನುವ ಬದಲು ಹೇಗೆ ಮಾಡುವುದು ಎಂದು ಕೇಳಿ ತಿಳಿಯಿರಿ.
3. ಮನೆಯ ಆರ್ಥಿಕ ಸ್ಥಿತಿ ಹಾಗೂ ವ್ಯಕ್ತಿಯ ಆದಾಯವನ್ನು ನೋಡಿ ಮನೆಗೆ ಬೇಕಾದ
ವಸ್ತುಗಳನ್ನು ನಿಧಾನವಾಗಿ ಖರೀದಿಸಿ.
4. ಹಬ್ಬ ಬಂದಾಗ ಮನೆಯಲ್ಲಿ ಕಜ್ಜಾಯ, ದೇವರ ಪೂಜೆ ಆದ ಮೇಲೆ ಗಂಡ, ಅತ್ತೆ ಮಾವನಿಗೆ
ನಮಸ್ಕರಿಸಿ ಆಶೀರ್ವಾದ ಪಡೆಯಲು ಮರೆಯಬೇಡಿ.
5. ನಿಮ್ಮ ಪತಿ ಹೊರಗಡೆ ದುಡಿದು ಬಂದಮೇಲೆ ಬೇಡದಿರುವ ಚಿಕ್ಕ ಪುಟ್ಟ ಸಮಸ್ಯೆಗಳನ್ನೂ ದೊಡ್ಡದಾಗಿಸಿ ಅವರನ್ನು ಇನ್ನಷ್ಟು
ಗೊಂದಲಕ್ಕೀಡುಮಾಡುವ ಬದಲು ಅವರ ಮನಸ್ಸು ಪ್ರಶಾಂತವಾಗಿರಲು ಅವಕಾಶ ನೀಡಿ.
6. ನಿಮ್ಮ ಕೊಂಕು ಮಾತುಗಳಿಂದ ಗಂಡನಿಗೆ ಬುದ್ಧಿ ಬರುವ ಬದಲು ನಿಮ್ಮ ಮೇಲೆ ಇರುವ ಪ್ರೀತಿ ಕಡಿಮೆಯಾಗುತ್ತದೆ ಎಂಬುದನ್ನು ಮರೆಯಬೇಡಿ.
7. ಆದಷ್ಟು ನೀವು ಖುಷಿಯಾಗಿರಿ ನಿಮ್ಮ ಮನೆಯವರೂ ಖುಷಿಯಿಂದಿರಲು ಬಿಡಿ.
8. ಸಂಸಾರದಲ್ಲಿ ಬಂದ ಸಮಸ್ಯೆಗಳ ನಿವಾರಣೆಗೆ ನೀವೂ ಭಾಗಿಯಾಗಿ. ಅದೆಲ್ಲಾ ದೊಡ್ಡ ಸಮಸ್ಯೆಯಲ್ಲ ಎಂಬ ಸಾಂತ್ವಾನ ನೀಡಿ.
9. ತನ್ನ ಸಂಸಾರದಲ್ಲಷ್ಟೇ ಅಲ್ಲಾ ಪ್ರತಿಯೊಂದು ಸಂಸಾರದಲ್ಲೂ ಅವರದೇ ಆದ ಸಮಸ್ಯೆಗಳು ಇದ್ದೇ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
10. ನಿಮ್ಮ ಪ್ರೀತಿ ಹಾಗೂ ಪ್ರೀತಿಯ ವರ್ಣನೆಯನ್ನು ಮಾತಲ್ಲಿ ಹೇಳುವ ಬದಲು ಒಂದು ಹಾಳೆಯಲ್ಲಿ ಬರೆದು ಪತಿಗೆ ನೀಡಿ. ಅದು ನಿಮ್ಮ ಪ್ರೀತಿಯನ್ನು ಹೆಚ್ಚಿಸುತ್ತದೆ.
11. ವಿಶೇಷ ಸಂದರ್ಭದಲ್ಲಿ ನೀವು ಜೀರಿಗೆ ಡಬ್ಬದಲ್ಲೋ ಚಹ ಪುಡಿ ಡಬ್ಬದಲ್ಲೋ ಸಂಗ್ರಹಿಸಿಟ್ಟುಕೊಂಡ ಹಣದಿಂದ ಏನಾದರೊಂದು ಚಿಕ್ಕ ಉಡುಗೊರೆಯನ್ನು ಪತಿಗೆ ನೀಡಿ.
12. ಮನೆಯನ್ನು ಆದಷ್ಟು ಸ್ವಚ್ಛ ಹಾಗೂ ಖುಷಿಯ ವಾತಾವರಣ ಇರುವಂತೆ ನೋಡಿಕೊಳ್ಳಿ.

ಮುನಿಸು ಬರದು ನನಗೆ...




ಅಂದು ಯುಗಾದಿಯ ಸಂಭ್ರಮ. ಮನೆಯಲ್ಲಿ ಎಲ್ಲರಿಗೂ ಹೊಸವರ್ಷದ ಸಂತಸ. ಅಮ್ಮನಿಗಂತೂ ಮನೆಯವರಿಗೆ ಹೊಸ ಕಜ್ಜಾಯವನ್ನು ತಿನಿಸುವ ಹುರುಪು. ಅಕ್ಕಂದಿರಿಗೆಲ್ಲಾ ಹೊಸಬಟ್ಟೆ ತೊಟ್ಟು ಅಪ್ಪನೊಂದಿಗೆ ತೋರಣ ಕಟ್ಟುವುದರಲ್ಲೇ ಮುಳುಗಿದ್ದರು. ಏನೂ ಬೇಡನನಗೆ, ನೀನು ಕೊಡಿಸುತ್ತೇನೆ ಎಂದ ಸೈಕಲ್‌ ಎಲ್ಲಿ? ನೀನು ಸೈಕಲ್‌ ಕೊಡಿಸದಿದ್ದರೆ ನಾನು ನಿನ್ನ ಬಳಿ ಮಾತಾಡುವುದಿಲ್ಲ ಎಂದು ಅಜ್ಜನೊಂದಿಗೆ ಮುನಿಸಿಕೊಂಡಿದ್ದವಳು ನಾನು. ಆಗ ನನಗೇನು ಸೊಕ್ಕು ಕಡಿಮೆ ಇರಲಿಲ್ಲ. ಅಜ್ಜ ಗೊಂಬೆ, ಹೊಸಬಟ್ಟೆ ಕೊಟ್ಟು ಸಮಾಧಾನ ಮಾಡಿದರೂ ಅಜ್ಜನಮೇಲಿನ ಸಿಟ್ಟು ಇಳಿದಿರಲಿಲ್ಲ. ಅಜ್ಜ ತನ್ನ ತೊಡೆಯಮೇಲೆ ನನ್ನನ್ನು ಮಲಗಿಸಿಕೊಂಡು ತಲೆ ಸವರುತ್ತಾ ಹೇಳುವ ಕತೆಯೂ ಬೇಕಿರಲಿಲ್ಲ. ಮೂಗಿನಮೇಲಿನ ಸಿಟ್ಟು ಹಬ್ಬ ಮುಗಿದು ಒಂದುವಾರವಾದರೂ ಗುರ್...
ಅಂತಲೇ ಇತ್ತು. ಅಲ್ಲಿಯವರೆಗೂ ಅಜ್ಜನೊಂದಿಗೆ ಮಾತನಾಡುತ್ತಿರಲಿಲ್ಲ. ಎಂಟನೇದಿನ ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ಗುಲಾಬಿ ಬಣ್ಣದ ಸೈಕಲ್‌ ನಿಂತಿತ್ತು. ಅದನ್ನು ಕಂಡ ಕ್ಷಣವೇ ಬಗಲಿಗಿದ್ದ ಪಾಟೀಚೀಲವನ್ನು ಬಿಸಾಡಿ ಸೈಕಲ್‌ ಹಿಡಿದು ಆಡಲು ಹೊರಟೆ. ಇನ್ನೇನು ಸೈಕಲ್‌ ಹತ್ತಬೇಕು ಎನ್ನುವಷ್ಟರಲ್ಲೇ ಸೈಕಲ್‌ ನನ್ನ ಮೇಲೆ ಬಿದ್ದಿತ್ತು. ಆಗ ಸೈಕಲ್‌ ಮೇಲೆ ಸಿಟ್ಟು ಬಂದು ಅಜ್ಜಾ.., ಗಾಯಕ್ಕೆ ಎಣ್ಣೆ ಹಚ್ಚಿಕೊಡು ಎಂದೆ. ಆಗ ಆಯಿ ಅಜ್ಜ ಇಲ್ಲಾ, ಯಾರನ್ನೋ ನೋಡಲು ಹೋಗಿದ್ದಾರೆ ಎಂದಿದ್ದೇ ತಡ ಅಜ್ಜನೊಂದಿಗೆ ಮಾತನಾಡಬೇಕೆಂದು ಗೇಟಲ್ಲೇ ಕುಳಿತು ಅಜ್ಜನಿಗಾಗಿ ಸಕಾಯುತ್ತಿದ್ದೆ. ಅಜ್ಜನೊಂದಿಗೆ ಕ್ಷಮೆ ಕೇಳಬೇಕು, ಅಜ್ಜನೊಂದಿಗೆ ಮಾತಾಡಬೇಕು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಅಷ್ಟರಲ್ಲೇ ಒಬ್ಬಾತ ಓಡೋಡಿ ಬಂದು ಗೇಟು ತೆಗಿ ತಂಗಿ ಎಂದು ಹೇಳಿದ. ಇವನ್ಯಾರು ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತಿದ್ದಂತೆಯೇ ಒಂದು ದೊಡ್ಡವಸ್ತುವಿಗೆ ಬಿಳಿಬಟ್ಟೆ ಸುತ್ತಿ ನಾಲ್ಕೈದು ಜನ ಹೊತ್ತು ತರುತ್ತಿದ್ದರು. ಅರೇ, ಅಜ್ಜಾ ನನಗೆ ಸೈಕಲ್‌ ಮತ್ತೆ ಮನೆಗೇನೋ ಇನ್ನೊಂದು ಹೊಸವಸ್ತು ಕಳಿಸಿದ್ದಾನೆ ಎಂದು ಆಶ್ಚರ್ಯ ಪಟ್ಟು ನಿಂತಿದ್ದೆ. ಎಲ್ಲರೂ ಮನೆಗೆ ಹೋಗಿದ್ದೇ ಆ ವಸ್ತುವನ್ನು ಕೆಳಗಿಳಿಸಿ ಬಿಚ್ಚುತ್ತಿದ್ದಾಗ ಕಂಡಿದ್ದು ರಕ್ತದಿಂದ ತುಂಬಿದ್ದ ಅಜ್ಜನ ನಿರ್ಜೀವ ಮುಖ. ಒಂದು ನಿರ್ಜೀವ ವಸ್ತುವನ್ನು ಪಡೆಯುವ ಆಸೆಯಿಂದ ಜೀವಂತವಾದ ಆಸ್ತಿಯಾಗಿದ್ದ ಅಜ್ಜನ ಪ್ರೀತಿಯನ್ನೇ ಕಳೆದುಕೊಂಡಿದ್ದೆ. ಅಜ್ಜನ ಹನ್ನೆರಡನೆಯ ದಿನದಂದು ಬಂದ ಭಾಗವತರು ಅಪ್ಪನ ಬಳಿ ‘ಇವರು ಸೈಕಲ್‌ ಖರೀದಿಸಲು ಸಾಲಪಡೆದಿದ್ದರು. ಆದರೆ ಆ ಹಣ ಈಗಲೇ ಕೊಡಬೇಕೆಂದಿಲ್ಲ. ನಿಮ್ಮ ಕಷ್ಟಗಳೆಲ್ಲ ಕಳೆಯಲಿ, ನಿಧಾನವಾಗಿ ಕೊಡಿ. ಪಾಪ ಇಂಥ ವ್ಯಕ್ತಿ ಈರೀತಿ ಅಪಘಾತದಲ್ಲಿ ಸಾವನ್ನಪ್ಪಬಾರದಿತ್ತು’ ಎಂದರು.
ಆ ಕ್ಷಣದಿಂದಲೇ ಜೀನದಲ್ಲಿ ಯಾರೊಂದಿಗೂ ಮುನಿಸಿಕೊಂಡು ಮಾತು ಬಿಡಬಾರದು ಎಂಬುದನ್ನು ಅರಿತೆ. ನನಗೆ ಬುದ್ಧಿ ಬರಲು ಪ್ರೀತಿಯ ಅಜ್ಜನ ಸಾವೇ ಆಗಬೆಕಿತ್ತಾ..? ಒಂದಂತೂ ನಿಜ, ಪ್ರೀತಿಯ ಜೀವವಾಗಿದ್ದ ಅಜ್ಜ ನನ್ನ ಬಳಿ ಇದ್ದಷ್ಟು ಹೊತ್ತೂ ಮುನಿಸಿನಿಂದ ಮಾತನಾಡಲಿಲ್ಲ. ಆದ್ರೆ ಈಗ ಅಜ್ಜ ನೀನು ಬೇಕು. ನಿನ್ನೊಂದಿಗೆ ಮಾತನಾಡಬೇಕು. ನಿನ್ನ ತೊಡೆಯ ಮೇಲೆ ಮಲಗಿ ನೀ ಹೇಳುವ ಕಥೆ ಕೇಳಬೇಕು ಎಂದು ಗೋಗರೆದರೂ ಅಜ್ಜ ಬರಲಾರ... ಇನ್ನೇನಿದ್ದರೂ ಅವನ ಪ್ರೀತಿಯ ನೆನಪುಗಳಷ್ಟೇ..!