Thursday, January 10, 2013

Friday, May 6, 2011

ಅಮ್ಮಾ... ನಾ.. ನೀನಾಗಬೇಕು...

ಮೇ ಎರಡನೇ ಭಾನುವಾರ ಅಂತಾರಾಷ್ಟ್ರೀಯ ಅಮ್ಮಂದಿರ ದಿನ. ಪ್ರೀತಿಯ ಅಮ್ಮನಿಗೆ "ಅಮ್ಮನ ದಿನದ ಶುಭಾಶಯಗಳು...'' ಅಮ್ಮನ ದಿನದ ಪ್ರಯುಕ್ತ ಗೆಳತಿಯೊಬ್ಬಳ ನೊಂದ ಭಾವನೆಯನ್ನು ಇಲ್ಲಿ ಬರೆದಿದ್ದೇನೆ.

"ಹ್ಞೂಂ ನಮ್ಮಾ... ನನ್ನ ತಪ್ಪಿನ ಬಗ್ಗೆ ಅರಿವಾಗ ಬೇಕಾದರೆ ನಾನೂ ಅಮ್ಮನಾಗಬೇಕಾಯಿತು. ಒಂದಂತೂ ನಿಜ ಅಮ್ಮಾ... ನನ್ನ ಜೀವನದಲ್ಲಿ ಇನ್ನೂ ಏನಾದರೂಂದು ಆಸೆ ಇದೆಯೆಂದರೆ ಅದು ನನ್ನ ಮಗಳ ಜೀವನವನ್ನು ಸುಂದರೊಳಿಸುವುದೊಂದೇ..."


ಅಮ್ಮಾ...ನೀನು ಅದೆಷ್ಟು ಪ್ರೀತಿಸುತ್ತಿದ್ದೆ ನನ್ನ... ಅದೆಷ್ಟು
ಬೈಯ್ಯುತ್ತಿದ್ದೆ...ಆದ್ರೆ ಯಾಕಾಗಿ ಪ್ರೀತಿಸುತ್ತಿದ್ದೆ... ಯಾಕಾಗಿ ಬೈಯ್ಯುತ್ತಿದ್ದೆ ಎಂಬುದನ್ನೇ
ತಿಳಿಯಲಾಗಿಲ್ಲ ನನಗೆ...
ಪ್ರತಿ ಬಾರಿಯೂ ಮಾಡಿದ ಕೆಲಸದಲ್ಲಿ ತಪ್ಪು ಹುಡುಕುತ್ತಿದ್ದೆ. ಒಂದೊಂದು ವರ್ತನೆಗೂ ಒಂದೊಂದು ರೀತಿಯ ಕಾರಣ ಹೇಳಿ
ಬೈಯ್ಯುತ್ತಿದ್ದೆ. ಕಾಲೇಜಿನ ಆ ಸುಂದರ ಜೀವನದಲ್ಲಿ ಕಹಿ ನೆನಪು ಎಂದ್ರೇನೇ
ನಿನ್ನ ಬೈಗಳಿಂದ ಕೂಡಿದ ಮಾತುಗಳು...
ಹಾಗೇ ಮಾಡಬೇಕು, ಹೀಗೆ ಮಾಡಬೇಕು ಎನ್ನುವ ಕಡಿವಾಣದ ಮಾತು.
ನಿನ್ನ ಬಗ್ಗೆ ನನ್ನಲ್ಲಿ ಬೇಸರದ ಭಾವನೆಯನ್ನು ಮೂಡಿಸುತ್ತಿತ್ತು. ಯಾಕಾದರೂ ಅವಳು ನನ್ನ ಅಮ್ಮನಾದಳೋ... ಎಂಬ ಬೇಸರ. ಎಲ್ಲಿಗೇ ಹೋಗಲಿ
ಶಾಪಿಂಗ್‌ ಆಗಲೀ, ಸಿನಿಮಾಕ್ಕಾಗಲೀ ಆ ನಿನ್ನ ಕೆಂಪು ಕಣ್ಣು ಎದುರು ಬರುತ್ತಿತ್ತು.
ನಾನೇನು ಮಾಡಿದರೂ ಸರಿಯಾಗುತ್ತಿರಲಿಲ್ಲ...
ನಿನ್ನ ಮದುವೆಯಾಗುವವರೆಗೂ ನನ್ನ ಮಾತನ್ನು ಕೇಳಬೇಕು.
ನಂತರ ಏನು ಬೇಕಾದರೂ ಮಾಡು. ನಾನೇನೂ ಪ್ರಶ್ನಿಸುವುದಿಲ್ಲ ಎಂಬ
ಮಾತನ್ನು ನಾನು ದಿನಾ ಕಾಲೇಜಿಗೆ ಹೋಗುವಾಗ ಚೂರು ಬೇಸರವಿಲ್ಲದೆ
ಸುಪ್ರಭಾತದಂತೆ ಹೇಳುತ್ತಿದ್ದೆ. ಪದೇ ಪದೇ ನಿನ್ನ ಈ ರೀತಿಯ ರಿಸ್ಟ್ರಿಕ್ಷನ್‌
ಮಾತುಗಳನ್ನು ಕೇಳುತ್ತಿದ್ದಾದಗ ನೀನು ಅದೆಂತ ಹುಡುಗನನ್ನು ನನಗೆಂಟಾಕುತ್ತೀಯೋ ಎಂದೂ ಅನಿಸುತ್ತಿತ್ತು. ಅದಕ್ಕಾಗಿ ನಿನ್ನಿಷ್ಟಕ್ಕೆ ವಿರುದ್ಧವಾಗಿ
ನಾನಿಷ್ಟ ಪಡುವ ಹುಡುಗನನ್ನೇ ಮದುವೆಯಾದೆ...
ನಾನಿಷ್ಟ ಪಟ್ಟ ವ್ಯಕ್ತಿಯನ್ನು ನನ್ನ ಜೀವನದ ಸಂಗಾತಿಯಾಗಿ ಪಡೆದೆ. ಇನ್ನೇನು ನನ್ನ ಜೀವನ ಸಂತೋಷದ ಕ್ಷಣಗಳೆಡೆಗೆ ನಡೆಯುತ್ತದೆಂದುಕೊಂಡು ಸಂತೋಷವಾಗಿದ್ದೆ. ಆಗಲೇ ಅರಿವಾಗಿದ್ದು. ನಾನು
ನಾನಾಗಿರಬಾರದಿತ್ತು. ನಿನ್ನಹಾಗೆ ಇರಬೇಕಿತ್ತು ಅಂತಾ...
ಸುಖಜೀವನ ಎಂದು ಕೊಂಡ ನನ್ನ ಭ್ರಮೆಗೆ ಇದೀಗ ಸರಿಯಾಗಿ
ಶಿಕ್ಷೆಯಾಗಿದೆ. ಅಪ್ಪನ ಆರೋಗ್ಯ, ಅಜ್ಜಿಯ ಆರೈಕೆ, ಬೆನ್ನು ಮುರಿಯುವಷ್ಟು ಇರುವ
ತೋಟದ ಕೆಲಸ ಜೊತೆಗೆ ಆರು ಜನ ಮಕ್ಕಳ ಆರೈಕೆ. ಅವರೆಲ್ಲಿ ದಾರಿ ತಪ್ಪಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೋ ಎಂಬ ನಿನ್ನ ಆ ಕಾಳಜಿಯ
ಮಾತನ್ನು ನಾನೆಷ್ಟು ತಪ್ಪು ತಿಳಿದಿದ್ದೆ...
ಆಗ ನಿನಗೆ ಯಾವುದೇ ಐಶಾರಾಮೀ ಜೀವನವಿರಲಿಲ್ಲ. ನಿನ್ನ ಕಷ್ಟಗಳಿಗೆ ನಾನು ಭಾಗಿಯಾಗುತ್ತೇನೆ ಎಂಬುವವರ
ಸಹಾಯದ ದನಿಯಿರಲಿಲ್ಲ. ಆದರೂ ಸಂಸಾರವನ್ನು ಅದೆಷ್ಟು ಜವಾಬ್ದಾರಿಯಿಂದ ನಿಭಾಯಿಸಿದ್ದೀ...
ಎಲ್ಲಾ ಮಕ್ಕಳಿಗೂ ಉತ್ತಮ
ವಿದ್ಯಾಭ್ಯಾಸ ಕೊಡ್ಸಿದ್ದೀಯಾ... ಆದರೆ ನಾನು...
ನನಗೆಲ್ಲಾ ಸೌಕರ್ಯಗಳಿದೆ, ಕೈತುಂಬಾ ಹಣವಿದೆ, ಮಡಿಲಲ್ಲಿ ಒಂದು
ಹೆಣ್ಣು ಮಗುವಿದೆ. ಆದರೆ ನಿನ್ನ ನೋವೇ ನನ್ನ ನೋವು ಎಂದು ಸಾಂತ್ವನ
ನೀಡುವವರ್ಯಾರೂ ನನ್ನ ಬಳಿಯಿಲ್ಲ. ನೀನು ಊಟಮಾಡಿದ್ದೀಯಾ ಎಂದು ಹೇಳುವವರು ನನಗಾರೂ ಈಗಿಲ್ಲ...
ನಿನ್ನ ಸಹಾಯ ನನಗೆ ಬೇಕಮ್ಮಾ ಎಂದು ಹೇಳುವಷ್ಟು ಧೈರ್ಯವೂ ನನ್ನಲ್ಲಿಲ್ಲ. ಯಾಕೆಂದ್ರೆ ನನ್ನಿಷ್ಟದಂತೆ
ಬದುಕಬೇಕು ಎಂಬ ಹುಂಬತನದಿಂದ ನೀನು ತೋರಿಸಿದ ಹುಡುಗನನ್ನು
ಮದುವೆಯಾಗಲಿಲ್ಲ. ಜೀವದ ಗೆಳೆಯನಾಗಿರುತ್ತೇನೆ ಎಂದು ನಂಬಿ ಕೈ
ಹಿಡಿದ ಹುಡುಗನು ಕೈಗೊಂದು ಮಗು ಕೊಟ್ಟು ಹೋದ. ಹೋದವನು
ಮತ್ತೆ ಬರಲಿಲ್ಲ. ಈಗ ನನ್ನದು ಎಂದು ಕೊಂಡಿದ್ದ ಮಗು ಮಾತ್ರ ನನ್ನ
ಮಡಿಲಲ್ಲಿದೆ. ಆದರೆ ಈ ಸಮಾಜದಲ್ಲಿ ಪುರುಷನಿಲ್ಲದ ಕುಟುಂಬದಲ್ಲಿ
ಬೆಳೆವ ನನ್ನ ಮಗಳಿಗೆ ನಾನೆಂಥ ಸಂಸ್ಕಾರ ನೀಡಬಲ್ಲೆನಮ್ಮಾ...
ನಾನು ನಿನ್ನೊಡನೆ ಇದ್ದಾಗ ಮಗಳು ಕೆಟ್ಟ ದಾರಿ ತುಳಿಯಬಾರದೆಂದು ಅದೆಷ್ಟು ಕಾಳಜಿ ವಹಿಸುತ್ತಿದ್ದೆ ಎಂಬುದು ಇದೀಗ ನನ್ನ
ಮಗಳನ್ನು ಬೆಳೆಸುವಾಗ, ನಾನವಳ ಬಗ್ಗೆ ಕಾಳಜಿ ವಹಿಸುವಾಗ ಅರಿವಾಗುತ್ತಿದೆಯಮ್ಮಾ...
ಅಮ್ಮಾ ಅಂದ್ರೆ ಏನು... ಆಕೆ ಯಾಕೆ ಅಷ್ಟು ಕಾಳಜಿ ವಹಿಸುತ್ತಾಳೆಂದು.
ಹೌದಮ್ಮಾ... ನನ್ನ ಕ್ಷಮಿಸಿ ಬಿಡಮ್ಮಾ... ನಿನ್ನ ಆ ಕಾಳಜಿಯ ಮಾತನ್ನು
ನಾನು ಸೂಕ್ಷ್ಮವಾಗಿ ಅರಿಯಬೇಕಿತ್ತು. ನಿನ್ನ ಆ ಕರುಳಿನ ನೋವನ್ನು
ನಾನಾಗ ಅರಿತಿರಲಿಲ್ಲ. ಇದೀಗ ನಾನು ಒಂದು ಮಗುವಿಗೆ ಅಮ್ಮ
ನಾಗಿದ್ದೇನೆ. ನಾನು ದೊಡ್ಡವಳಾದಾಗ ನಿನ್ನ ಮನಸ್ಸಿನಲ್ಲಾದ ಗೊಂದಲಗಳು
ನನ್ನ ಮಗಳು ಚಿಕ್ಕವಳಿರುವಾಗಲೇ ನನ್ನನ್ನು ಕಾಡುತ್ತಿದೆ...
ನಿನ್ನ ಬಳಿರುವಾಗಲಂತೂ ನನ್ನ ತಪ್ಪುಗಳಿಗೆ ನಿನ್ನಲ್ಲಿ ಕ್ಷಮೆ ಕೇಳಲಿಲ್ಲ. ಇದೀಗೇಳುತ್ತಿದ್ದೇನಮ್ಮಾ...
ಹ್ಞೂಂ ನಮ್ಮಾ... ನನ್ನ ತಪ್ಪಿನ ಬಗ್ಗೆ ಅರಿವಾಗಬೇಕಾದರೆ ನಾನೂ ಅಮ್ಮನಾಗಬೇಕಾಯಿತು.
ಒಂದಂತೂ ನಿಜ ಅಮ್ಮಾ... ನನ್ನ ಜೀವನದಲ್ಲಿನ್ನೂ ಏನಾದರೂ ಆಸೆ ಇದೆಯೆಂದರೆ ಅದು ನನ್ನ ಮಗಳ ಜೀವನವನ್ನು
ಸುಂದರಗೊಳಿಸುವುದೊಂದೇ... ಜೀವನದಲ್ಲಿ ನಾನೀಗ ಯಾರ ಸಹಾಯವೂ ಇಲ್ಲದೆ ಅಸಹಾಯಕಳಾಗಿದ್ದೇನೆ ಎನ್ನುವುದೇನೋ ನಿಜ. ಆದ್ರೆ ನೀನು ಕೊಟ್ಟ ಶಿಕ್ಷಣ,
ಸಂಸ್ಕಾರ ಮರೆಯಾಗಲಿಲ್ಲ. ನಿನ್ನ ಆದರ್ಶ, ಪ್ರೀತಿ, ವಾತ್ಸಲ್ಯದ ಗುಣಗಳೇ ನನ್ನ ಬದುಕಿಗೂ ಬೆಳಕನ್ನು ಚೆಲ್ಲುತ್ತದೆ ಎಂಬ ಭರವಸೆ ನನಗಿದೆ.
ನಿನ್ನಂಥ ಸುಶೀಲೆಯಾದ ಹೆಣ್ಣು ನನ್ನಮ್ಮ ಎಂಬುದನ್ನು ನನ್ನ ನಡೆ ನುಡಿಯಲ್ಲಿ ವ್ಯಕ್ತ ಪಡಿಸಲು ನನಗಿದೊಂದು ಸದಾವಕಾಶ ಎಂದುಕೊಳ್ಳುತ್ತೇನಮ್ಮಾ.