Monday, March 28, 2011

ಮುನಿಸು ಬರದು ನನಗೆ...




ಅಂದು ಯುಗಾದಿಯ ಸಂಭ್ರಮ. ಮನೆಯಲ್ಲಿ ಎಲ್ಲರಿಗೂ ಹೊಸವರ್ಷದ ಸಂತಸ. ಅಮ್ಮನಿಗಂತೂ ಮನೆಯವರಿಗೆ ಹೊಸ ಕಜ್ಜಾಯವನ್ನು ತಿನಿಸುವ ಹುರುಪು. ಅಕ್ಕಂದಿರಿಗೆಲ್ಲಾ ಹೊಸಬಟ್ಟೆ ತೊಟ್ಟು ಅಪ್ಪನೊಂದಿಗೆ ತೋರಣ ಕಟ್ಟುವುದರಲ್ಲೇ ಮುಳುಗಿದ್ದರು. ಏನೂ ಬೇಡನನಗೆ, ನೀನು ಕೊಡಿಸುತ್ತೇನೆ ಎಂದ ಸೈಕಲ್‌ ಎಲ್ಲಿ? ನೀನು ಸೈಕಲ್‌ ಕೊಡಿಸದಿದ್ದರೆ ನಾನು ನಿನ್ನ ಬಳಿ ಮಾತಾಡುವುದಿಲ್ಲ ಎಂದು ಅಜ್ಜನೊಂದಿಗೆ ಮುನಿಸಿಕೊಂಡಿದ್ದವಳು ನಾನು. ಆಗ ನನಗೇನು ಸೊಕ್ಕು ಕಡಿಮೆ ಇರಲಿಲ್ಲ. ಅಜ್ಜ ಗೊಂಬೆ, ಹೊಸಬಟ್ಟೆ ಕೊಟ್ಟು ಸಮಾಧಾನ ಮಾಡಿದರೂ ಅಜ್ಜನಮೇಲಿನ ಸಿಟ್ಟು ಇಳಿದಿರಲಿಲ್ಲ. ಅಜ್ಜ ತನ್ನ ತೊಡೆಯಮೇಲೆ ನನ್ನನ್ನು ಮಲಗಿಸಿಕೊಂಡು ತಲೆ ಸವರುತ್ತಾ ಹೇಳುವ ಕತೆಯೂ ಬೇಕಿರಲಿಲ್ಲ. ಮೂಗಿನಮೇಲಿನ ಸಿಟ್ಟು ಹಬ್ಬ ಮುಗಿದು ಒಂದುವಾರವಾದರೂ ಗುರ್...
ಅಂತಲೇ ಇತ್ತು. ಅಲ್ಲಿಯವರೆಗೂ ಅಜ್ಜನೊಂದಿಗೆ ಮಾತನಾಡುತ್ತಿರಲಿಲ್ಲ. ಎಂಟನೇದಿನ ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ಗುಲಾಬಿ ಬಣ್ಣದ ಸೈಕಲ್‌ ನಿಂತಿತ್ತು. ಅದನ್ನು ಕಂಡ ಕ್ಷಣವೇ ಬಗಲಿಗಿದ್ದ ಪಾಟೀಚೀಲವನ್ನು ಬಿಸಾಡಿ ಸೈಕಲ್‌ ಹಿಡಿದು ಆಡಲು ಹೊರಟೆ. ಇನ್ನೇನು ಸೈಕಲ್‌ ಹತ್ತಬೇಕು ಎನ್ನುವಷ್ಟರಲ್ಲೇ ಸೈಕಲ್‌ ನನ್ನ ಮೇಲೆ ಬಿದ್ದಿತ್ತು. ಆಗ ಸೈಕಲ್‌ ಮೇಲೆ ಸಿಟ್ಟು ಬಂದು ಅಜ್ಜಾ.., ಗಾಯಕ್ಕೆ ಎಣ್ಣೆ ಹಚ್ಚಿಕೊಡು ಎಂದೆ. ಆಗ ಆಯಿ ಅಜ್ಜ ಇಲ್ಲಾ, ಯಾರನ್ನೋ ನೋಡಲು ಹೋಗಿದ್ದಾರೆ ಎಂದಿದ್ದೇ ತಡ ಅಜ್ಜನೊಂದಿಗೆ ಮಾತನಾಡಬೇಕೆಂದು ಗೇಟಲ್ಲೇ ಕುಳಿತು ಅಜ್ಜನಿಗಾಗಿ ಸಕಾಯುತ್ತಿದ್ದೆ. ಅಜ್ಜನೊಂದಿಗೆ ಕ್ಷಮೆ ಕೇಳಬೇಕು, ಅಜ್ಜನೊಂದಿಗೆ ಮಾತಾಡಬೇಕು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಅಷ್ಟರಲ್ಲೇ ಒಬ್ಬಾತ ಓಡೋಡಿ ಬಂದು ಗೇಟು ತೆಗಿ ತಂಗಿ ಎಂದು ಹೇಳಿದ. ಇವನ್ಯಾರು ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತಿದ್ದಂತೆಯೇ ಒಂದು ದೊಡ್ಡವಸ್ತುವಿಗೆ ಬಿಳಿಬಟ್ಟೆ ಸುತ್ತಿ ನಾಲ್ಕೈದು ಜನ ಹೊತ್ತು ತರುತ್ತಿದ್ದರು. ಅರೇ, ಅಜ್ಜಾ ನನಗೆ ಸೈಕಲ್‌ ಮತ್ತೆ ಮನೆಗೇನೋ ಇನ್ನೊಂದು ಹೊಸವಸ್ತು ಕಳಿಸಿದ್ದಾನೆ ಎಂದು ಆಶ್ಚರ್ಯ ಪಟ್ಟು ನಿಂತಿದ್ದೆ. ಎಲ್ಲರೂ ಮನೆಗೆ ಹೋಗಿದ್ದೇ ಆ ವಸ್ತುವನ್ನು ಕೆಳಗಿಳಿಸಿ ಬಿಚ್ಚುತ್ತಿದ್ದಾಗ ಕಂಡಿದ್ದು ರಕ್ತದಿಂದ ತುಂಬಿದ್ದ ಅಜ್ಜನ ನಿರ್ಜೀವ ಮುಖ. ಒಂದು ನಿರ್ಜೀವ ವಸ್ತುವನ್ನು ಪಡೆಯುವ ಆಸೆಯಿಂದ ಜೀವಂತವಾದ ಆಸ್ತಿಯಾಗಿದ್ದ ಅಜ್ಜನ ಪ್ರೀತಿಯನ್ನೇ ಕಳೆದುಕೊಂಡಿದ್ದೆ. ಅಜ್ಜನ ಹನ್ನೆರಡನೆಯ ದಿನದಂದು ಬಂದ ಭಾಗವತರು ಅಪ್ಪನ ಬಳಿ ‘ಇವರು ಸೈಕಲ್‌ ಖರೀದಿಸಲು ಸಾಲಪಡೆದಿದ್ದರು. ಆದರೆ ಆ ಹಣ ಈಗಲೇ ಕೊಡಬೇಕೆಂದಿಲ್ಲ. ನಿಮ್ಮ ಕಷ್ಟಗಳೆಲ್ಲ ಕಳೆಯಲಿ, ನಿಧಾನವಾಗಿ ಕೊಡಿ. ಪಾಪ ಇಂಥ ವ್ಯಕ್ತಿ ಈರೀತಿ ಅಪಘಾತದಲ್ಲಿ ಸಾವನ್ನಪ್ಪಬಾರದಿತ್ತು’ ಎಂದರು.
ಆ ಕ್ಷಣದಿಂದಲೇ ಜೀನದಲ್ಲಿ ಯಾರೊಂದಿಗೂ ಮುನಿಸಿಕೊಂಡು ಮಾತು ಬಿಡಬಾರದು ಎಂಬುದನ್ನು ಅರಿತೆ. ನನಗೆ ಬುದ್ಧಿ ಬರಲು ಪ್ರೀತಿಯ ಅಜ್ಜನ ಸಾವೇ ಆಗಬೆಕಿತ್ತಾ..? ಒಂದಂತೂ ನಿಜ, ಪ್ರೀತಿಯ ಜೀವವಾಗಿದ್ದ ಅಜ್ಜ ನನ್ನ ಬಳಿ ಇದ್ದಷ್ಟು ಹೊತ್ತೂ ಮುನಿಸಿನಿಂದ ಮಾತನಾಡಲಿಲ್ಲ. ಆದ್ರೆ ಈಗ ಅಜ್ಜ ನೀನು ಬೇಕು. ನಿನ್ನೊಂದಿಗೆ ಮಾತನಾಡಬೇಕು. ನಿನ್ನ ತೊಡೆಯ ಮೇಲೆ ಮಲಗಿ ನೀ ಹೇಳುವ ಕಥೆ ಕೇಳಬೇಕು ಎಂದು ಗೋಗರೆದರೂ ಅಜ್ಜ ಬರಲಾರ... ಇನ್ನೇನಿದ್ದರೂ ಅವನ ಪ್ರೀತಿಯ ನೆನಪುಗಳಷ್ಟೇ..!

No comments:

Post a Comment